ರೋಣ
ಭಾರತದ ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಒಂದು ತಾಲ್ಲೂಕು ಹಾಗೂ ತಾಲ್ಲೂಕಿನ ಆಡಳಿತ ಕೇಂದ್ರ.  ಜಿಲ್ಲೆಯ ಈಶಾನ್ಯ ದಿಕ್ಕಿನಲ್ಲಿರುವ ಈ ತಾಲ್ಲೂಕನ್ನು ದಕ್ಷಿಣದಲ್ಲಿ ಗದಗ ತಾಲ್ಲೂಕು, ನೈಋತ್ಯದಲ್ಲಿ ನವಲಗುಂದ ಪಶ್ಚಿಮದಲ್ಲಿ ನರಗುಂದ ತಾಲ್ಲೂಕುಗಳೂ ಉತ್ತರದಲ್ಲಿ ಬಾಗಲಕೋಟೆ ಜಿಲ್ಲೆಯ ಕುಷ್ಟಗಿ, ಪೂರ್ವಕ್ಕೆ ಯಲಬುರ್ಗ ತಾಲ್ಲೂಕುಗಳು ಸುತ್ತುವರಿದಿವೆ.  ಗದಗ ಉಪವಿಭಾಗಕ್ಕೆ ಸೇರಿರುವ ಈ ತಾಲ್ಲೂಕಿನಲ್ಲಿ 93 ಗ್ರಾಮಗಳೂ 3 ಪಟ್ಟಣಗಳೂ ಇವೆ.  ನರೇಗಲ್ಲ, ರೋಣ, ಹೊಳೆಆಲೂರು ಹೋಬಳಿಗಳು. ತಾಲ್ಲೂಕಿನ ವಿಸ್ತೀರ್ಣ 1,290.6 ಚ.ಕಿಮೀ. ಜನಸಂಖ್ಯೆ 2,47,691.

ತಾಲ್ಲೂಕು ಹೆಚ್ಚುಮಟ್ಟಿಗೆ ಬಯಲು ಪ್ರದೇಶ. ತಾಲ್ಲೂಕಿನ ಉತ್ತರದಲ್ಲಿ ಮಲಪ್ರಭಾನದಿ ಪೂರ್ವಾಭಿಮುಖವಾಗಿ ಹಡಗಲಿಯ ವರೆಗೂ ಹರಿದು, ಬಿಜಾಪುರ ಜಿಲ್ಲೆಯ ಬಾದಾಮಿ ತಾಲ್ಲೂಕನ್ನು ರೋಣದಿಂದ ಬೇರ್ಪಡಿಸಿದೆ. ಮುಂದೆ ಈ ನದಿ ಬಾಗಲಕೋಟೆ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಈ ತಾಲ್ಲೂಕಿನಲ್ಲಿ ಮಲಪ್ರಭಾನದಿಯನ್ನು ಕೂಡಿಕೊಳ್ಳುವ ಕೆಲವು ಹಳ್ಳಗಳುಂಟು. ಅವುಗಳಲ್ಲಿ ಬೆಣ್ಣೆಹಳ್ಳ ಮುಖ್ಯವಾದದ್ದು. ನರಗುಂದ, ರೋಣ ತಾಲ್ಲೂಕುಗಳ ಮಧ್ಯೆ ಈಶಾನ್ಯಾಬಿ üಮುಖವಾಗಿ ಹರಿದು, ಮಾಳವಾಡದ ಉತ್ತರದಲ್ಲಿ ತಾಲ್ಲೂಕನ್ನು ಪ್ರವೇಶಿಸಿ, ಮೆಣಸಗಿಯ ಪೂರ್ವಕ್ಕೆ ಮಲಪ್ರಭಾನದಿಯನ್ನು ಸೇರಿಕೊಳ್ಳುತ್ತದೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 609 ಮಿಮೀ.  ತಾಲ್ಲೂಕಿನ ಹೆಚ್ಚುಭಾಗ ಎರೆ ಮತ್ತು ಹೊಂಡು ಅಥವಾ ಎರೆಮಣ್ಣಿನಿಂದ ಕೂಡಿದೆ. ಕಪ್ಪುಮಣ್ಣಿನ ಪ್ರದೇಶವೇ ಹೆಚ್ಚೆನ್ನಬಹುದು. ರೋಣದ ಬಳಿ ಕರೇಕಲ್ಲು ಹಾಗೂ ಕೆಲವು ಮೋಡಿಯ ಕಲ್ಲುಗಳುಂಟು. ತಾಲ್ಲೂಕಿನ ಸು. 1,27,338 ಹೆಕ್ಟೇರ್ ಪ್ರದೇಶದಲ್ಲಿ ಸು. 1,19,269 ಹೆಕ್ಟೇರ್ ವ್ಯವಸಾಯಕ್ಕೆ ಹಿಂದೆ ಒಳಪಟ್ಟಿತ್ತು.  477 ಹೆಕ್ಟೇರ್ ಅರಣ್ಯಪ್ರದೇಶವಿತ್ತು. ಈಗ ಮಲಪ್ರಭಾ ಯೋಜನೆಯಿಂದ ಈ ತಾಲ್ಲೂಕಿನಲ್ಲಿ ನೀರಾವರಿ ಸೌಕರ್ಯವಿದೆ. ಈ ತಾಲ್ಲೂಕಿನ ಮುಖ್ಯಬೆಳೆ ಜೋಳ, ಗೋದಿ, ಸಜ್ಜೆ ಮತ್ತು ಸೇಂಗಾ.  ಹತ್ತಿ, ಹರಳು, ಎಳ್ಳು ಮುಂತಾದ ತೈಲೋತ್ಪಾದಕ ಕಾಳುಗಳು, ಇತರ ದ್ವಿದಳ ಧಾನ್ಯಗಳನ್ನು ಬೆಳೆಯುವರಲ್ಲದೆ ವಿವಿಧ ಹಣ್ಣು ಮತ್ತು ತರಕಾರಿಗಳನ್ನೂ ಬೆಳೆಯುತ್ತಾರೆ.

ತಾಲ್ಲೂಕಿನ ಪಶ್ಚಿಮದಲ್ಲಿ ಹುಬ್ಬಳ್ಳಿ-ಗದಗ-ಹುಟಗಿ ರೈಲ್ವೆ ಮಾರ್ಗ ಹಾದು ಹೋಗಿದ್ದು ತಾಲ್ಲೂಕಿನಲ್ಲಿ ಮುಲ್ಲಾಪುರ, ಸವಡಿ, ಹೊಳೆ ಆಲೂರುಗಳಲ್ಲಿ ರೈಲ್ವೆನಿಲ್ದಾಣಗಳಿವೆ.
ಈ ತಾಲ್ಲೂಕಿನ ಗಜೇಂದ್ರಗಡದ ಕಾಲಕಾಲೇಶ್ವರನ ಜಾತ್ರೆ, ನರೇಗಲ್ಲಿನ ವೀರಪ್ಪಜ್ಜನ ಜಾತ್ರೆ ಪ್ರಸಿದ್ಧವಾದವು. ಗಜೇಂದ್ರಗಡ (ನೋಡಿ- ಗಜೇಂದ್ರಗಡ) ರೋಣದ ಪೂರ್ವಕ್ಕಿದೆ. ಇಲ್ಲಿನ ಬೆಟ್ಟದ ಮೇಲೆ ಶಿವಾಜಿ ಕಟ್ಟಿಸಿದ ಒಂದು ಕೋಟೆಯಿದೆ. ರೋಣದ ಆಗ್ನೇಯದಲ್ಲಿರುವ ನರೇಗಲ್ಲ (ನೋಡಿ- ನರೇಗಲ್) ದೇವಸ್ಥಾನಗಳಿಗೂ ಶಾಸನಗಳಿಗೂ ಪ್ರಸಿದ್ಧ.  ರೋಣಕ್ಕೆ ನೈಋತ್ಯದಲ್ಲಿ 8 ಕಿಮೀ ದೂರದಲ್ಲಿರುವ ಸವಡಿಯಲ್ಲಿ ಬ್ರಹ್ಮದೇವ ಮತ್ತು ನಾರಾಯಣ ದೇವಾಲಯಗಳಿವೆ. ಇಲ್ಲಿ ಮೂರು ಶಿಲಾಶಾಸನಗಳಿದ್ದು ಒಂದು ರಾಷ್ಟ್ರಕೂಟ ಖೊಟ್ಟಿಗನ ಕಾಲದ್ದು (970), ಮತ್ತೊಂದು ಆರನೆಯ ವಿಕ್ರಮಾದಿತ್ಯನಿಗೆ ಸೇರಿದ್ದು (1082). ರೋಣದ ಪೂರ್ವಕ್ಕೆ ಸು. 20 ಕಿಮೀ ದೂರದಲ್ಲಿರುವ ಸೂಡಿ ಗ್ರಾಮವನ್ನು 11ನೆಯ ಶತಮಾನದ ಶಾಸನಗಳಲ್ಲಿ ರಾಜಧಾನಿ ಎಂದು ಕರೆಯಲಾಗಿದೆ. 1010ರ ಶಾಸನ ಒಂದರಂತೆ ಚಾಳುಕ್ಯರಾಣಿ ಅಕ್ಕಾದೇವಿ ಈ ಪ್ರಾಂತವನ್ನು ಆಳುತ್ತಿದ್ದಳೆಂದು ತಿಳಿದುಬರುತ್ತದೆ.	*

ರೋಣ ಈ ತಾಲ್ಲೂಕಿನ ಆಡಳಿತ ಕೇಂದ್ರ ಪಟ್ಟಣ. ಹುಬ್ಬಳ್ಳಿ-ಬಿಜಾಪುರ ರೈಲ್ವೆ ಮಾರ್ಗದಲ್ಲಿ ಮುಲ್ಲಾಪುರ ರೈಲ್ವೆನಿಲ್ದಾಣದ ಪೂರ್ವಕ್ಕೆ ಸು.13ಕಿಮೀ ದೂರದಲ್ಲಿದೆ. ಜನಸಂಖ್ಯೆ 66,550.
ಇದು ಹಿಂದೆ ಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದು, ದೊಡ್ಡ ಅಗ್ರಹಾರ ವಾಗಿತ್ತು. ಇಲ್ಲಿಯ ಆಡಳಿತವನ್ನು 104 ಮಹಾಜನರು ನೋಡಿಕೊಳ್ಳು ತ್ತಿದ್ದರೆಂದು ಇಲ್ಲಿಯ ಶಾಸನ ಗಳಿಂದ ತಿಳಿದುಬರುತ್ತದೆ. ರಾಷ್ಟ್ರಕೂಟ 1ನೆಯ ಅಮೋ ಘವರ್ಷನ ಆಡಳಿತ ಕಾಲದ (874) ಒಂದು ಶಾಸನ ಇಲ್ಲಿದೆ. ಇಲ್ಲಿನ ಪುರಾಣ ಪ್ರಸಿದ್ಧ ದ್ರೋಣಾಚಾರ್ಯರ ಗುಡಿಯ ಬಳಿ ಸಭಾಗೃಹ ಮತ್ತು ಅಭ್ಯಾಸಗೃಹಗಳ ದೀಪಕ್ಕಾಗಿ, ವಿದ್ಯಾದೇವತೆಯ ಪೂಜೆಗಾಗಿ ದಾನವಿತ್ತ ಶಾಸನಗಳಿವೆ.  ದ್ರೋಣಾಚಾರ್ಯರ ಗುಡಿಯಲ್ಲಿ ನಂದಿ ವಿಗ್ರಹ ಒಳಗಡೆಯೂ ದ್ರೋಣಾಚಾರ್ಯರ ಮೂರ್ತಿ ಹೊರಗ ಡೆಯೂ ಇವೆ. ರೋಣವೆಂಬ ಹೆಸರು ದ್ರೋಣದಿಂದ ಬಂದಿದೆ ಎಂದು ಪ್ರತೀತಿ. ಇಲ್ಲಿಯ ಅನಂತ ಶಯನ, ಲೋಕನಾಥ ಮತ್ತು ಸಂಗಮೇಶ್ವರ ದೇವಾಲಯಗಳು ನೋಡ ತಕ್ಕವಾಗಿವೆ. ಇಲ್ಲಿಯ ಬಸ್ತಿಗುಡಿಯಲ್ಲಿ ಪಾಶ್ರ್ವನಾಥನ ಮೂರ್ತಿ ಇದೆ.	
(ಪಿ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ